ಇಂದು ಕಾಂಗ್ರೆಸ್ ಪಕ್ಷದ ಮುಖಂಡರ ನಿಯೋಗದ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಹಿರಿಯ ಸದಸ್ಯರು, ಸರಕಾರದ ಮುಖ್ಯ

ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಕೋವಿಡ್ 19 ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚಿಸಲಾಯಿತು, ಇದೆ ವೇಳೆ ನಾನು ಸಹ ಸರ್ಕಾರಕ್ಕೂ  ಈ ಕೆಳಗಿನ ಸಲಹೆ -ಸೂಚನೆಗಳನ್ನು ನೀಡಿದ್ದೇನೆ.

1. ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಜಾರಿಗೆ ತಂದ ಕ್ರಮಗಳಿಗಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
2. ಕೋವಿಡ್ ತಪಾಸಣಾ ಪ್ರಯೋಗಾಲಯಗಳನ್ನು ಪ್ರತಿ ಜಿಲ್ಲೆಗೆ ವಿಸ್ತರಿಸಲಾಗಿದೆ. ಆದರೆ ಅವು ನಿಗದಿತ ಸಮಯದೊಳಗೆ ಶೀಘ್ರವಾಗಿ ಕಾರ್ಯಾರಂಭ ಮಾಡಲು ಕ್ರಮ ಕೈಕೊಳ್ಳಬೇಕು.
3. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ದಿನಾಂಕ 13-04-2020 ರಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಈ ಮಾರ್ಗ ಸೂಚಿಗಳನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಗಮನಕ್ಕೆ ತಂದು, ವಿದ್ಯುನ್ಮಾನ ಹಾಗೂ ಪತ್ರಿಕೆಗಳ ಮುಖಾಂತರ ಹೆಚ್ಚಿನ ಪ್ರಚಾರ ನೀಡಿ, ಅವು ಹೆಚ್ಚು ಹಿರಿಯ ನಾಗರೀಕರನ್ನು ತಲುಪುವಂತೆ ನೋಡಿಕೊಳ್ಳಬೇಕು.
4. ಈಗಾಗಲೇ 2014ಕ್ಕಿಂತ ಮುಂಚೆ ಇರುವ ಹಳೆಯ ಬ್ಯಾಂಕ್ ಖಾತೆಗಳನ್ನೇ ಜನ್ ಧನ್ ಖಾತೆಗಳಾಗಿ ಪರಿವರ್ತಿಸಬೇಕು. ಬಡಮಹಿಳೆಯರಿಗೆ ಹೊಸದಾಗಿ ಜನ್ ಧನ್ ಖಾತೆ ತೆರೆಯಲು ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಮಿತ್ರರನ್ನು ಪ್ರೇರೇಪಿಸಬೇಕು. 
5. ಈ ಲಾಕ್ದೌನ್ ನಿಂದಾಗಿ ರಾಜ್ಯದಲ್ಲಿ ಎಂ.ಎಸ್.ಎಂ.ಈ, ಕೈಗಾರಿಕಾ ಘಟಕಗಳು ಹಾಗೂ ಇತರೆ ವ್ಯಾಪಾರಿ ಘಟಕಗಳು ತೀವ್ರ ಸಂಕಷ್ಟದಲ್ಲಿವೆ. ಹೀಗಾಗಿ ಈ ಘಟಕಗಳು ಸ್ಥಳೀಯ ಸಂಸ್ಥೆಗಳಿಗೆ ಪಾವತಿಸುವ ನೀರಿನ ತೆರಿಗೆ, ಆಸ್ತಿ ತೆರಿಗೆ ಹಾಗೂ ವಿದ್ಯುತ್ ಸಂಪರ್ಕದ ನಿಗದಿತ ಶುಲ್ಕವನ್ನು ಮುಂದಿನ 6 ತಿಂಗಳುಗಳವರೆಗೆ ಮನ್ನಾ ಮಾಡಬೇಕು. ಇದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.
6. ಈ ಲಾಕ್–ಡೌನದಿಂದಾಗಿ ಮುಂಬರುವ ದಿನಗಳಲ್ಲಿ ಮುಖ್ಯವಾಗಿ ತರಕಾರಿಗಳು ಅಭಾವ ಕಂಡುಬರಬಹುದು ಆದ್ದರಿಂದ ತೋಟಗಾರಿಕೆ ಇಲಾಖೆ ಆಸಕ್ತ ರೈತರಿಗೆ ತರಕಾರಿ ಬೀಜಗಳನ್ನು ಉಚಿತ ನೀಡುವ ಬಗ್ಗೆ ಯೋಜನೆ ರೂಪಿಸಬೇಕು. 
7. ಈಗಾಗಲೇ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಸಹಾಯಧನ ಘೋಷಣೆ ಮಾಡಿದೆ. ಆದರೆ ಸವಿತಾ ಸಮಾಜದವರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು, ಬೀದಿಬದಿ ವ್ಯಾಪಾರಿಗಳು, ಅಟೋ, ಕ್ಯಾಬ್, ಟ್ರಕ್ ಲಾರಿ ಮುಂತಾದ ವಾಹನ ಚಾಲಕರು ಮತ್ತು ಕ್ಲೀನರುಗಳು, ಅಡುಗೆ ಕೆಲದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅಚಱಕರು, ಸಣ್ಣ ಪುಟ್ಟ ವ್ಯಾಪಾರಸ್ಥ ಮುಂತಾದ ವೃತ್ತಿದವರಿಗೂ ಸಹ ಸಹಾಯಧನ ಘೋಷಣೆ ಮಾಡಬೇಕು.
8. ಗೋವಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಉತ್ತರಕನ್ನಡ ಜಿಲ್ಲೆಯ ಮೀನುಗಾರರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು, ಕೂಡಲೇ ಮುಖ್ಯಮಂತ್ರಿಗಳು ಗೋವಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಂಪರ್ಕ ಸಾಧಿಸಿ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅವರು ಪುನಃ ಜಿಲ್ಲೆಗೆ ಬರುವದಾದರೆ ಅವರ ಆರೋಗ್ಯದ ಸೂಕ್ತ ತಪಾಸಣೆ ನಡೆಸಿ ಅವರನ್ನು ಕರೆಯಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಬೇಕು.
9. ರಾಜ್ಯ ಕಾರ್ಮಿಕರ ವಿಮಾ ನಿಗಮದಲ್ಲಿ ನೊಂದಾಯಿತ ಕಾರ್ಮಿಕರಿಗೆ ಸಹಾಯಧನ ನೀಡಲು ಕೇಂದ್ರ ಸರ್ಕಾರದೊಡನೆ ಮಾತುಕತೆ ನಡೆಸಬೇಕು. ಜೊತೆಗೆ ಅವರಿಗೆ ಸೂಕ್ತ ನಿರುದ್ಯೋಗ ಪರಿಹಾರ ಒದಗಿಸಲು ವ್ಯವಸ್ಥೆ ಮಾಡಬೇಕು.
10. ಬೆಂಗಳೂರು ಭಾರತದ ನವೋದ್ಯಮಗಳ ರಾಜಧಾನಿ ಮತ್ತು ನವೋದ್ಯಮ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ. COVID -19 ಪ್ರಾರಂಭವಾಗುವ ಮೊದಲೇ ಅನೇಕ ನವೋದ್ಯಮಗಳು ತೊಂದರೆಯನ್ನುಭವಿಸುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಈಗ ಪರಿಸ್ಥಿತಿ ಹದಗೆಟ್ಟಿದೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನವೋದ್ಯಮಗಳ ಪ್ರತಿನಿಧಿಗಳ ಸಭೆಯನ್ನು ಕರೆಯಲು ಆಗ್ರಹಿಸಲಾಯಿತು.
11. ಭಾರತೀಯ ರಿಸರ್ವ್ ಬ್ಯಾಂಕ್ ದಿನಾಂಕ 27 ಮಾರ್ಚ್ 2020 ರಂದು ಸಾಲದ ಮೇಲಿನ ಇ.ಎಮ್.ಐ.ಗಳನ್ನು ಮೂರು ತಿಂಗಳುಗಳ ಕಾಲ ಮುಂದೂಡಿ, ಮನೆ ಸಾಲ ಮುಂತಾದವರುಗಳ ಬಡ್ಡಿ ದರವನ್ನು ಕಡಿತ ಮಾಡಿ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಪರಿಹಾರದ ಪ್ಯಾಕೇಜ್ ಘೋಷಿಸಿದೆ. ಆದರೆ ಈ ಯೋಜನೆಯು ಕೆಲವು ಬ್ಯಾಂಕಗಳಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬ ದೂರುಗಳಿವೆ. ಕಾರಣ ಮಾನ್ಯ ಮುಖ್ಯಮಂತ್ರಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳು ಲೀಡ್ ಬ್ಯಾಂಕರಗಳ ಸಭೆ ಕರೆದು ಈ ಪರಿಹಾರ ಪ್ಯಾಕೇಜ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಲಾಯಿತು.
12. ಲಾಕ್‌ಡೌನ್ ಶಾಶ್ವತ ಪರಿಹಾರವಲ್ಲ. ಸರ್ಕಾರ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಹಂತ ಹಂತವಾಗಿ ಪ್ರಾರಂಭಿಸಲು ಖಚಿತವಾದ ಕಾರ್ಯತಂತ್ರವನ್ನು ರಚಿಸಬೇಕು. ಗೃಹ ಮಂತ್ರಾಲಯದ ಮಾರ್ಗಸೂಚಿಗಳ ಪ್ರಕಾರ 20 ಏಪ್ರಿಲ್ 2020 ರ ನಂತರ ಕೃಷಿ ಚಟುವಟಿಕೆ, ಮೀನುಗಾರಿಕೆ ಮತ್ತು ಗ್ರಾಮೀಣ ಭಾಗದಲ್ಲಿರುವ ಕೈಗಾರಿಕಾ ಘಟಕಗಳನ್ನು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿವೆ. ಈ ಉದ್ದೇಶಕ್ಕಾಗಿ ಮ್ಯಾಪಿಂಗ್ ಚಟುವಟಿಕೆಯನ್ನು ಮಾಡಬೇಕಾಗಿದೆ ಮತ್ತು ಹಸಿರು ವಲಯಗಳಲ್ಲಿನ ಕೈಗಾರಿಕೆಗಳನ್ನು ಏಕ ಪ್ರವೇಶ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ,   ನೈರ್ಮಲ್ಯೀಕರಣ ಮುಂತಾದ ಷರತ್ತುಗಳೊಂದಿಗೆ ಪ್ರಾರಂಭಿಸಬಹುದಾಗಿದೆ. ಆದ್ದರಿಂದ ಮೇ 3 ರ ನಂತರ ಅಥವಾ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ಕೂಡಲೇ ಆರ್ಥಿಕ ಚಟುವಟಿಕೆಯನ್ನು ಮತ್ತೆ ತೆರೆಯಲು ಸರಕಾರd, ಮುಂದಾಲೋಚನೆ ಹಾಗೂ ದೂರದೃಷ್ಟಿಯನ್ನು ಉಪಯೋಗಿಸಿ ಕ್ರಿಯಾ ಯೋಜನೆಯನ್ನು ಮುಂಚಿತವಾಗಿ ಸಿದ್ದಪಡಿಸಲು ಆಗ್ರಹಿಸಲಾಯಿತು.
Reporter :
Riyaz Ahmad Ittangiwale Samjho Bharath online news Haliyal

No comments:

Post a Comment